ಶ್ರೀರಂಗರಾಯ 2

	ವಿಜಯನಗರದ ಆರವೀಡು ವಂಶದ ರಾಜ.  ಮೊದಲನೆಯ ವೆಂಕಟಪತಿಯ ಸೋದರ ರಾಮನ ಮಗ. ವೆಂಕಟಪತಿ ಸಾಯುವಾಗ ಈತನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ. ಆದರೆ ವೆಂಕಟಪತಿಯ ಮಗನೆಂದು ಘೋಷಿಸಲಾಗಿದ್ದ ಒಬ್ಬ ಹುಡುಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು, ಈಗ ಆ ಅಳಿಯನನ್ನು ಸಿಂಹಾಸನದಲ್ಲಿ ಸ್ಥಾಪಿಸಲು ಜಗರಾಯ ಯತ್ನಿಸಿದ.  ಶ್ರೀರಂಗ ಮತ್ತು ಆತನ ಸಂಸಾರದವರೆಲ್ಲರು ಸೆರೆಮನೆಯ ಬಂದಿಯಾದರು. ಆದರೆ ಸಾಮಂತನಾಗಿದ್ದ ಎಚ್ಚಮನಾಯಕನ ಪ್ರಯತ್ನದಿಂದ ಶ್ರೀರಂಗನ ಮಗ ರಾಮದೇವ ಸೆರೆಮನೆಯಿಂದ ಪಾರಾಗಿ, ಇತರ ನಿಷ್ಠಾವಂತ ನಾಯಕರ ನೆರವಿನಿಂದ ತೋವೂರಿನ ಕದನದಲ್ಲಿ ಜಗರಾಯನನ್ನು ಸೋಲಿಸಿ, ಸಿಂಹಾಸನವನ್ನೇರಿದ.  ಹೀಗಾಗಿ ಶ್ರೀರಂಗ ಹೆಸರಿಗೆ ಅರಸನಾದರೂ ದುರಂತಕ್ಕೀಡಾದ ವ್ಯಕ್ತಿಯಾಗಿ ಕಣ್ಮರೆಯಾದ.									
		(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ